278. ಅನರ್ಹಗೊಂಡಿದ್ದಾಗ ಸದಸ್ಯ, ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುವುದಕ್ಕಾಗಿ ದಂಡನೆ. (1) ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಮೇರೆಗೆ ರಚಿತವಾದ ನಿಯಮಗಳ ಅಡಿಯಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುವ ಯಾರೇ ಆಗಲಿ, ಅವನು ಹಾಗೆ ಪದಧಾರಣ ಮಾಡಲು ಹಕ್ಕುಳ್ಳವನಾಗಿಲ್ಲವೆಂದು ಅಥವಾ ಹಕ್ಕುಳ್ಳವನಾಗಿರುವುದು ನಿಂತುಹೋಗಿರುವುದೆಂದು ತಿಳಿದಿದ್ದೂ ಸದಸ್ಯನಾಗಿ ಹಾಗೆ ಕಾರ್ಯನಿರ್ವಹಿಸಿದರೆ ಅಪರಾಧ ನಿರ್ಣಯವಾದ ಮೇಲೆ, ಅವನು ಸದಸ್ಯನಾಗಿ ಉಪಸ್ಥಿತನಿರುವ ಅಥವಾ ಮತ ಕೊಡುವ ಪ್ರತಿಯೊಂದು ದಿನಕ್ಕೆ ನೂರು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
(2) ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಯಾರೇ ಆಗಲಿ ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಮೇರೆಗೆ ರಚಿಸಲಾದ ನಿಯಮಗಳ ಅಡಿಯಲ್ಲಿ ಅವನು ಹಾಗೆ ಪದಧಾರಣ ಮಾಡಲು ಅಥವಾ ಅಂಥ ಪ್ರಕಾರ್ಯಗಳನ್ನು ನಿರ್ವಹಿಸಲು ಹಕ್ಕುಳ್ಳವನಾಗಿಲ್ಲವೆಂದು ಅಥವಾ ಹಕ್ಕುಳ್ಳವನಾಗಿರುವುದು ನಿಂತು ಹೋಗಿರುವುದೆಂದು ತಿಳಿದಿದ್ದು ಅಪರಾಧ ನಿರ್ಣಯವಾದ ಮೇಲೆ, ಹಾಗೆ ಅವನು ಕಾರ್ಯನಿರ್ವಹಿಸುವ ಅಥವಾ ಪ್ರಕಾರ್ಯವನ್ನು ನಿರ್ವಹಿಸುವಂಥ ಪ್ರತಿಯೊಂದು ದಿನಕ್ಕೆ ಎರಡು ನೂರು ರೂಪಾಯಿಗಳ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
(3) ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿದ್ದು, ಯಾವನೇ ವ್ಯಕ್ತಿಯು ಅವನ ಸ್ವಾಧೀನ ಅಥವಾ ನಿಯಂತ್ರಣದಲ್ಲಿರುವ ಅಥವಾ ಸ್ವಾಧೀನಕ್ಕೆ ಬಂದಿರುವಂಥ ಸಂದರ್ಭಾನುಸಾರ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಯಾವುದೇ ದಸ್ತಾವೇಜನ್ನು ಅಥವಾ ಅದರಲ್ಲಿ ನಿಹಿತವಾದ ಅಥವಾ ಅದಕ್ಕೆ ಸೇರಿದ ಯಾವುದೇ ಹಣ ಅಥವಾ ಇತರೆ ಸ್ವತ್ತುಗಳನ್ನು ಹುದ್ದೆಯಲ್ಲಿನ ಅವನ ಉತ್ತರಾಧಿಕಾರಿಗೆ ಅಥವಾ ಗೊತ್ತುಪಡಿಸಿದ ಇತರೆ ಪ್ರಾಧಿಕಾರಿಗೆ ಒಪ್ಪಿಸಲು ತಪ್ಪಿದರೆ,
(ಎ) ಅಂಥ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ, ಅವನ ಪದಾವಧಿ ಮುಕ್ತಾಯವಾದ ಕೂಡಲೇ ಪ್ರತಿಯೊಂದು ಸಂದರ್ಭದಲ್ಲಿ; ಮತ್ತು
(ಬಿ) ಸಂದರ್ಭಾನುಸಾರ, ಅಧ್ಯಕ್ಷನ ಕೋರಿಕೆಯ ಮೇರೆಗೆ ಉಪಾಧ್ಯಕ್ಷನಾಗಿದ್ದ ವ್ಯಕ್ತಿಯ ಸಂದರ್ಭದಲ್ಲಿ, ಅಪರಾಧ ನಿರ್ಣಯವಾದ ಮೇಲೆ ಒಂದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
279. ಹಿತಾಸಕ್ತಿಯನ್ನು ಹೊಂದಿದ್ದ ಸದಸ್ಯನು, ಮತಚಲಾಯಿಸಿದ್ದಕ್ಕಾಗಿ ದಂಡನೆ. 53ನೇ ಪ್ರಕರಣದ (4)ನೇ ಉಪಪ್ರಕರಣದ ಅಥವಾ 141ನೇ ಪ್ರಕರಣದ (2)ನೇ ಉಪಪ್ರಕರಣದ (ಜಿ) ಖಂಡದ ಅಥವಾ 180ನೇ ಪ್ರಕರಣದ (2)ನೇ ಉಪಪ್ರಕರಣದ (ಜಿ) ಖಂಡದ ಉಪಬಂಧಗಳನ್ನು ಉಲ್ಲಂಘಿಸಿ, ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ, ಅಥವಾ ಜಿಲ್ಲಾ ಪಂಚಾಯತಿಯ ಸದಸ್ಯನಾಗಿ ಮತ ಚಲಾಯಿಸುವ ಯಾರೇ ಆಗಲಿ, ಅಪರಾಧ ನಿರ್ಣಯವಾದ ಮೇಲೆ ಉದುನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು. 280. ಕರಾರಿನಲ್ಲಿನ ಹಿತಾಸಕ್ತಿಯನ್ನು ಅಧಿಕಾರಿ ಅಥವಾ ನೌಕರನು ಆರ್ಜಿಸಿರುವುದಕ್ಕಾಗಿ ದಂಡನೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಯಾವನೇ ಸದಸ್ಯನು, ಅಧಿಕಾರಿಯು ಅಥವಾ ನೌಕರನು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ತಾನಾಗಿಯೇ ಅಥವಾ ಪಾಲುದಾರ, ನಿಯೋಜಕ ಅಥವಾ ನೌಕರನ ಮೂಲಕ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯೊಂದಿಗೆ ಅಥವಾ ಅದರಿಂದ ಅಥವಾ ಅದರ ಪರವಾಗಿ ಯಾವುದೇ ಕರಾರು ಅಥವಾ ನಿಯೋಜನೆಯಲ್ಲಿ ಯಾವುದೇ ಪಾಲು ಅಥವಾ ಹಿತಾಸಕ್ತಿಯನ್ನು ತಿಳಿದೂ ಆರ್ಜಿಸಿದರೆ, ಅವನು ಅಪರಾಧ ನಿರ್ಣಯವಾದ ಮೇಲೆ ಐದುನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು: ಪರಂತು, ಯಾವನೇ ವ್ಯಕ್ತಿಯು, ಯಾವುದೇ ಕಂಪನಿಯಲ್ಲಿ ಷೇರುದಾರನಾಗಿರುವ ಅಥವಾ ಸದಸ್ಯನಾಗಿರುವ ಕಾರಣ ಮಾತ್ರದಿಂದಲೇ ಅವನು ಅಂಥ ಕಂಪನಿಯ ನಿರ್ದೆಶಕನಾಗಿದ್ದ ಹೊರತು, ಅಂಥ ಕಂಪನಿ ಮತ್ತು ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ನಡುವೆ ಮಾಡಿಕೊಂಡ ಯಾವುದೇ ಕರಾರಿನಲ್ಲಿ ಅವನು ಹಿತ್ತಾಸಕ್ತಿಯನ್ನು ಹೊಂದಿರುವುದಾಗಿ ಗ್ರಹಿಸತಕ್ಕದ್ದಲ್ಲ:
ಮತ್ತು ಪರಂತು, ಈ ಪ್ರಕರಣದಲ್ಲಿರುವುದಾವುದೂ, ಕಮಿಷನರ್ನ ಮಂಜೂರಾತಿಯೊಂದಿಗೆ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯೊಂದಿಗೆ ಕರಾರನ್ನು ಮಾಡಿಕೊಳ್ಳುವ ಯಾವನೇ ವ್ಯಕ್ತಿಗೆ ಅನ್ವಯವಾಗತಕ್ಕದ್ದಲ್ಲ.
281. ಕೆಲವು ಅಧಿಕಾರಿಗಳನ್ನು ಅಕ್ರಮವಾಗಿ ಅಡ್ಡಿಪಡಿಸುವುದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಕಾರ್ಯದರ್ಶಿ ಅಥವಾ ಅಂಥ ಅದಿಕಾರಿಯು, ಯಾವುದೇ ಸ್ಥಳ, ಕಟ್ಟಡ ಅಥವಾ ಭೂಮಿಯ ಮೇಲೆ ಅಥವಾ ಅದನ್ನು ಪ್ರವೇಶಿಸಲು ಅವನ ಅಧಿಕಾರಗಳನ್ನು ಕಾನೂನುಬದ್ಧವಾಗಿ ಪ್ರತ್ಯಾಯೋಜಿಸಲಾಗಿರುವಂಥ ಯಾವನೇ ವ್ಯಕ್ತಿಯನ್ನು, ಅದರ ಮೇಲೆ ಅಥವಾ ಅದರೊಳಗೆ ಪ್ರವೇಶಿಸುವ ಅವನ ಕಾನೂನುಬದ್ಧ ಅಧಿಕಾರವನ್ನು ಚಲಾಯಿಸುವುದನ್ನು ತಡೆಗಟ್ಟುವ ಯಾವನೇ ವ್ಯಕ್ತಿಯು, ಅಪರಾಧ ನಿರ್ಣಯವಾದ ಮೇಲೆ ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ಸಾದಾ ಕಾರಾವಾಸದಿಂದ ಅಥವಾ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.
282. ಅಧ್ಯಕ್ಷ ಅಥವಾ ಉಪಾಧ್ಯಕ್ಷ ಮುಂತಾದವರನ್ನು ಅಡ್ಡಿಪಡಿಸುವುದರ ವಿರುದ್ಧ ನಿಷೇಧ. ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದಶರ್ಿ ಅಥವಾ ಸದಸ್ಯನನ್ನು ಅಥವಾ ತಾಲ್ಲೂಕು ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಸದಸ್ಯನನ್ನು ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಸದಸ್ಯನನ್ನು ಅಥವಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯು ನಿಯೋಜಿಸಿದ ಯಾವನೇ ವ್ಯಕ್ತಿಯನ್ನು ಅಥವಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಅಥವಾ ಅದರ ಪರವಾಗಿ ಕರಾರನ್ನು ಯಾರೊಂದಿಗೆ ಮಾಡಿಕೊಳ್ಳಲಾಗಿದೆಯೋ ಆ ಯಾವನೇ ವ್ಯಕ್ತಿಯನ್ನು, ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಲಾದ ಯಾವುದೇ ನಿಯಮ, ಉಪವಿಧಿ, ವಿನಿಯಮ ಅಥವಾ ಆದೇಶದ ಕಾರಣದಿಂದ ಅಥವಾ ಪರಿಣಾಮದಿಂದಾಗಿ ಮಾಡಲು ಅವನಿಗೆ ಅಧಿಕಾರ ನೀಡಿರುವಂಥ ಅಥವಾ ಅಗತ್ಯಪಡಿಸಿದಂಥ ಅವನ ಕರ್ತವ್ಯ ಅಥವಾ ಯಾವುದೇ ಕಾರ್ಯವನ್ನು ನಿರ್ವಹಿಸುವಲ್ಲಿ ಅಡ್ಡಿಪಡಿಸುವ ಯಾವನೇ ವ್ಯಕ್ತಿಯು, ಅಪರಾಧ ನಿರ್ಣಯವಾದ ಮೇಲೆ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
283. ನೋಟೀಸನ್ನು ತೆಗೆದುಹಾಕುವುದು ಅಥವಾ ಅಳಿಸಿ ಹಾಕುವುದರ ವಿರುದ್ಧ ನಿಷೇಧ. ಯಾವನೇ ವ್ಯಕ್ತಿಯು ಆ ಬಗ್ಗೆ ಅಧಿಕಾರವಿಲ್ಲದೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಅಥವಾ ಅದರ ಕಾರ್ಯಕಾರಿ ಪ್ರಾಧಿಕಾರಿಯ ಆದೇಶದ ಮೂಲಕ ಅಥವಾ ಅದರ ಮೇರೆಗೆ ಪ್ರದರ್ಶಿಸಿದ ಯಾವುದೇ ನೋಟೀಸನ್ನು ಅಥವಾ ನಿರ್ಮಿಸಿದ ಯಾವುದೇ ಚಿನ್ಹೆ ಅಥವಾ ಗುರುತನ್ನು ತೆಗೆದುಹಾಕಿದರೆ, ನಾಶಪಡಿಸಿದರೆ, ವಿರೂಪಗೊಳಿಸಿದರೆ ಅಥವಾ ಅನ್ಯಥಾ ಅಳಿಸಿ ಹಾಕಿದರೆ, ಅಪರಾಧ ನಿರ್ಣಯವಾದ ಮೇಲೆ ಒಂದು ನೂರು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
284. ಮಾಹಿತಿಯನ್ನು ಕೊಡದೆ ಇರುವುದಕ್ಕೆ ಅಥವಾ ಸುಳ್ಳು ಮಾಹಿತಿಯನ್ನು ಕೊಡುವುದಕ್ಕಾಗಿ ದಂಡನೆ. ಈ ಅಧಿನಿಯಮದ ಮೂಲಕ ಅಥವಾ ಯಾವುದೇ ನೋಟೀಸು ಅಥವಾ ಅದರ ಅಡಿಯಲ್ಲಿ ಹೊರಡಿಸಿದ ಇತರ ವ್ಯವಹರಣೆಗಳ ಮೂಲಕ ಯಾವುದೇ ಮಾಹಿತಿಯನ್ನು ಒದಗಿಸಲು ಅಗತ್ಯಪಡಿಸಲಾದ ಯಾವನೇ ವ್ಯಕ್ತಿಯು, ಅಂಥ ಮಾಹಿತಿಯನ್ನು ಒದಗಿಸಲು ತಪ್ಪಿದರೆ ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಒದಗಿಸಿದರೆ, ಅವನು ಅಪರಾಧ ನಿರ್ಣಯವಾದ ಮೇಲೆ ಒಂದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
285. ಸವಾಲು ಕೂಗುವುದರ ನಿಷೇಧ. (1) ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಯಾವನೇ ಸದಸ್ಯನು ಅಥವಾ ಯಾವನೇ ನೌಕರನು ಅಥವಾ ಈ ಅಧಿನಿಯಮದ ಅಡಿಯಲ್ಲಿ ಚರ ಅಥವಾ ಸ್ಥಿರ ಸ್ವತ್ತಿನ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಕರ್ತವ್ಯವನ್ನು ನೆರವೇರಿಸಬೇಕಾಗಿರುವ ಯಾವನೇ ಅಧಿಕಾರಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಂಥ ಮಾರಾಟದಲ್ಲಿ ಮಾರಾಟ ಮಾಡುವ ಸ್ವತ್ತಿಗಾಗಿ ಸವಾಲು ಕೂಗತಕ್ಕದ್ದಲ್ಲ ಅಥವಾ ಅದರಲ್ಲಿ ಹಿತಾಸಕ್ತಿಯನ್ನು ಆರ್ಜಿಸತಕ್ಕದ್ದಲ್ಲ.
(2) (1)ನೇ ಉಪಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವ ಯಾವನೇ ವ್ಯಕ್ತಿಯು ಅಪರಾಧ ನಿರ್ಣಯವಾದ ಮೇಲೆ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಮತ್ತು ಅವನು ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಅಧಿಕಾರಿ ಅಥವಾ ನೌಕರನಾಗಿದ್ದರೆ ಅವನು ಸೇವೆಯಿಂದ ವಜಾ ಆಗಲು ಸಹ ಗುರಿಯಾಗತಕ್ಕದ್ದು.
286. ಪಂಚಾಯತಿಗಳ ಸದಸ್ಯರು ಮತ್ತು ಅವುಗಳ ಅಧಿಕಾರಿಗಳು ಮತ್ತು ನೌಕರರಿಗೆ ``ಲೋಕ ನೌಕರ'' ಎಂಬ ಪದದ ಅನ್ವಯ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಪ್ರತಿಯೊಬ್ಬ ಸದಸ್ಯನನ್ನು ಮತ್ತು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಅಧೀನದಲ್ಲಿ ನಿಯೋಜಿತನಾದ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರನನ್ನು, ತತ್ಕಾಲದಲ್ಲಿ ಜಾರಿಯಲ್ಲಿರುವ ಭಾರತ ದಂಡ ಸಂಹಿತೆಯ 21ನೇ ಪ್ರಕರಣ ಮತ್ತು ಬ್ರಷ್ಟಾಚಾರ ನಿವಾರಣಾ ಅಧಿನಿಯಮ, 1988ರ (ಕೇಂದ್ರ ಅಧಿನಿಯಮ 1988ರ 49) ಅರ್ಥ ವ್ಯಾಪ್ತಿಯಲ್ಲಿ ಲೋಕ ನೌಕರನೆಂಬುದಾಗಿ ಭಾವಿಸತಕ್ಕದ್ದು.
287. ಜುಲ್ಮಾನೆಗಳನ್ನು ಪಂಚಾಯತಿ ನಿಧಿಗೆ ಜಮೆ ಮಾಡತಕ್ಕದ್ದು. ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಲಾದ ಯಾವುದೇ ನಿಯಮ, ವಿನಿಯಮಗಳು ಅಥವಾ ಉಪವಿಧಿಯ ಅಡಿಯಲ್ಲಿ ಯಾವುದೇ ಅಪರಾಧಕ್ಕಾಗಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯು ಅಥವಾ ಅದರ ಪರವಾಗಿ ಹೂಡಿದ ಯಾವುದೇ ಪ್ರಾಸಿಕ್ಯೂಷನ್ನಿನಲ್ಲಿ, ಮ್ಯಾಜಿಸ್ಟ್ರೇಟರು ವಿಧಿಸಿದ ಎಲ್ಲ ಜುಲ್ಮಾನೆಗಳನ್ನು, ಅದರ ನಿಧಿಗೆ ಜಮೆ ಮಾಡತಕ್ಕದ್ದು.
288. ಪಂಚಾಯತಿಗಳ ಯಾವುದೇ ಸ್ವತ್ತಿಗೆ ಉಂಟಾದ ಹಾನಿ ಮತ್ತು ಅದನ್ನು ತುಂಬಿ ಕೊಡುವ ಬಗೆ. ಯಾವನೇ ವ್ಯಕ್ತಿಯು, ಯಾವುದೇ ಕಾರ್ಯನಿರ್ಲಕ್ಷತೆ ಅಥವಾ ಕರ್ತವ್ಯಲೋಪದ ಕಾರಣದಿಂದಾಗಿ ಈ ಅಧಿನಿಯಮದ ಮೂಲಕ ಅಥವಾ ಅದರಡಿಯಲ್ಲಿ ವಿಧಿಸಿದ ದಂಡನೆಗೆ ಗುರಿಯಾಗಿದ್ದು ಮತ್ತು ಅಂಥ ವ್ಯಕ್ತಿಯು ಯಾವುದೇ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ಸ್ವತ್ತಿಗೆ ಹಾನಿ ಉಂಟು ಮಾಡಿದ್ದರೆ ಅವನು ಅಂಥ ಹಾನಿಯನ್ನು ತುಂಬಿಕೊಡಲು ಮತ್ತು ಅಂಥ ದಂಡವನ್ನು ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು ಮತ್ತು ಅಂಥ ಹಾನಿಯ ಮೌಲ್ಯವನ್ನು ವಿವಾದದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟರು ನಿರ್ಧರಿಸತಕ್ಕದ್ದು. ಅಂಥ ದಂಡನೆಯನ್ನು ಅನುಭವಿಸಿದ ವ್ಯಕ್ತಿಯು ಅಪರಾಧ ನಿರ್ಣಿತನಾಗತಕ್ಕದ್ದು ಮತ್ತು ತಗಾದೆಯ ಮೇಲೆ ಅಂಥ ಮೌಲ್ಯವನ್ನು ಸಂದಾಯ ಮಾಡದಿದ್ದಾಗ ಅದನ್ನು ಜಫ್ತಿಯ ಮೂಲಕ ಸಂಗ್ರಹಿಸತಕ್ಕದ್ದು ಮತ್ತು ಮ್ಯಾಜಿಸ್ಟೇಟರು ತದನುಸಾರವಾಗಿ ವಾರಂಟನ್ನು ಹೊರಡಿಸತಕ್ಕದ್ದು.
No comments:
Post a Comment